Tuesday 26 June 2018

ಹೆಚ್ ಡಿ ಕುಮಾರಸ್ವಾಮಿಯವರ ನಡೆಗೆ ಸಿದ್ದರಾಮಯ್ಯ ಗರಂ?




ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನೇಮಕಗೊಂಡಿದ್ದ ಅಧಿಕಾರಿಗಳನ್ನು ಕುಮಾರಸ್ವಾಮಿ ವರ್ಗಾವಣೆ ಮಾಡಿದ್ದಾರೆ. ಕೆಲವರನ್ನು ಅದಾಗಲೇ ಬೇರೆಡೆ ವರ್ಗಾಯಿಸಿದ್ದು, ಇನ್ನು ಕೆಲವರ ವರ್ಗಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇದು ಸಿದ್ದರಾಮಯ್ಯಗೆ ಸಿಟ್ಟು ತಂದಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯಗೆ ಆಪ್ತ ಅಧಿಕಾರಿಗಳಾಗಿದ್ದ ಮೂವರನ್ನು ಸಿಎಂ ಕುಮಾರಸ್ವಾಮಿ ವರ್ಗಾಯಿಸಿದ್ದಾರೆ. ಇದು ಬೇಸರಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ. ಸಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್, ಬೆಂಗಳೂರು ಪಶ್ಚಿಮ ವಿಭಾಗದ ಉಪ ವಿಭಾಗಾಧಿಕಾರಿ ಜಗದೀಶ್ ಅವರ ಜತೆ ಅಧಿಕಾರಿ ಅತೀಕ್ ಗೌಡ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಇದು ಸಿದ್ದರಾಮಯ್ಯಗೆ ಅತೀವ ಕೋಪ ತರಿಸಿದೆ ಎನ್ನಲಾಗುತ್ತಿದೆ.

ರೋಹಿಣಿ ವರ್ಗಾವಣೆ:

ನ್ಯಾಯಾಲಯದ ಮಟ್ಟದ ಸಂಘರ್ಷಕ್ಕೆ ತೆರಳಿದ್ದರೂ, ಹಠ ಹಿಡಿದು ಹಾಸನದಿಂದ ವರ್ಗಾವಣೆಗೊಂಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಸಿದ್ದರಾಮಯ್ಯ ವಾಪಸ್ ಪಡೆದಿರಲಿಲ್ಲ. ಸರ್ಕಾರಿ ವೆಚ್ಚದಲ್ಲಿ ಪ್ರಕರಣವನ್ನು ನ್ಯಾಯಾಲಯದಲ್ಲಿ ನಡೆಸುತ್ತಿದ್ದರು. ಆದರೆ ಕುಮಾರಸ್ವಾಮಿ ನಿನ್ನೆ ರೋಹಿಣಿ ಸಿಂಧೂರಿ ಅವರನ್ನು ಮರಳಿ ಹಾಸನಕ್ಕೆ ವರ್ಗಾವಣೆ ಮಾಡಿದ್ದಾರೆ.

ವರ್ಗಾವಣೆ ಮಾಡಿದ್ದ ಸಿದ್ದರಾಮಯ್ಯ ಹಾಗೂ ಮಾಡಿಸಿದ್ದ ಮಾಜಿ ಸಚಿವ ಎ. ಮಂಜುಗೆ ಇದು ದೊಡ್ಡ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಕೂಡ ಸಿದ್ದರಾಮಯ್ಯಗೆ ಸಾಕಷ್ಟು ಮುಜುಗರ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.