Monday 25 June 2018

ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್‍ನಲ್ಲಿ ಪ್ರಕಟಿಸಲಿದೆ.





ಬೆಂಗಳೂರು,ಜೂ.25- ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್‍ನಲ್ಲಿ ಪ್ರಕಟಿಸಲಿದೆ. ಜುಲೈ 5ರಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಹಂತದಲ್ಲಿ ಸಣ್ಣ , ಅತಿಸಣ್ಣ ರೈತರು ಸಹಕಾರಿ, ಸಾರ್ವಜನಿಕ ವಲಯ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಪಡೆದಿರುವ ಒಂದು ಲಕ್ಷದೊಳಗಿನ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಘೋಷಿಸಲಿದ್ದಾರೆ.

2ನೇ ಹಂತದಲ್ಲಿ ರೈತರು ಜಮೀನು ಹೊಂದಿರದೆ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದರೆ ಮಾತ್ರ ಮನ್ನಾವಾಗಲಿದೆ. ಈ ಬಾರಿ ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಶ್ರೀಮಂತರು, ಆಸ್ತಿವಂತರು, ವ್ಯಾಪಾರ ವಹಿವಾಟು ನಡೆಸುವವರು, ನೌಕರರು ಹಾಗೂ ಹೆಚ್ಚು ಜಮೀನು ಹೊಂದಿರುವವರ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈಗಾಗಲೇ ಕುಮಾರಸ್ವಾಮಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಅಗತ್ಯ ಮಾಹಿತಿಯನ್ನು ಕಲೆ ಹಾಕಿದ್ದು , ರೈತರ ಸಾಲಮನ್ನಾ ಕುರಿತಂತೆ ರೈತರು ಯಾವ ಯಾವ ಬ್ಯಾಂಕ್‍ಗಳಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದರ ಬಗ್ಗೆ ವಿವರಣೆ ಪಡೆದಿದ್ದಾರೆ.ಸಹಕಾರಿ ಸೇರಿದಂತೆ ಮತ್ತಿತರ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಒಟ್ಟು 53 ಸಾವಿರ ಕೋಟಿ ಸಾಲವನ್ನಾ ಒಂದೇ ಹಂತದಲ್ಲಿ ಮನ್ನಾ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕಾಗಿ ಈ ಬಾರಿ ಸಾಲ ಮನ್ನಾ ಮಾಡುವ ಯೋಜನೆಗೆ ಹೊಸ ಷರತ್ತುಗಳನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಪಂಜಾಪ್-ಮಹಾರಾಷ್ಟ್ರ ಮಾದರಿ:
ಈ ಹಿಂದೆ ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತಂತೆ ಅಲ್ಲಿನ ಸರ್ಕಾರಗಳು ಕೆಲವು ಕಠಿಣ ಕ್ರಮ ತೆಗೆದುಕೊಂಡಿದ್ದರ ಪರಿಣಾಮ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗಲಿಲ್ಲ. ಜೊತೆಗೆ ನಿಜವಾದ ಫಲಾನುಭವಿಗಳು ಇದರ ಲಾಭವನ್ನು ಪಡೆಯುವಂತಾಯಿತು.
ಪಂಜಾಬ್‍ನಲ್ಲಿ ಅಲ್ಲಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿದ್ದರು.

ಮೊದಲ ಹಂತದಲ್ಲಿ ಐದು ಎಕರೆಯೊಳಗಿನ ಸಣ್ಣ ಹಾಗೂ ಅತಿ ಸಣ್ಣ ರೈತರು ಪಡೆದಿದ್ದ 50 ಸಾವಿರ ರೂ. ಒಳಗಿನ ಸಾಲವನ್ನು ಮನ್ನ ಮಾಡಿತ್ತು. ಪರಿಣಾಮ ಬೊಕ್ಕಸಕ್ಕೂ ಹೊರೆಯಾಗಲಿಲ್ಲ. ಅಲ್ಲದೆ ಸರ್ಕಾರದ ಪ್ರಯೋಜನವನ್ನು ನಿಜವಾದ ಫಲಾನುಭವಿಗಳು ಪಡೆದಿದ್ದರಿಂದ ಮಧ್ಯವರ್ತಿಗಳ ಹಾವಳಿಯು ತಪ್ಪಿತು.
ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಕರ್ನಾಟಕ ಸರ್ಕಾರ ಮೊದಲು 5 ಎಕರೆ ಒಳಗಿರುವ ಭೂಮಿ ಹೊಂದಿರುವ ರೈತರ ಸಾಲವನ್ನು ಮನ್ನಾ ಮಾಡುವ ಘೋಷಣೆಯನ್ನು ಪ್ರಕಟಿಸಲಿದೆ.

ಮೀಟರ್ ಬಡ್ಡಿದಾರರಿಗೆ ಕಡಿವಾಣ:
ಬೆಳೆ ಸಾಲ ಮನ್ನಾದ ಹೆಸರಿನಲ್ಲಿ ಸಹಕಾರಿ ಬ್ಯಾಂಕ್‍ಗಳಿಂದ ಸಲ ಪಡೆದು ಬಡ್ಡಿ ವ್ಯವಹಾರ ನಡೆಸುತ್ತಿದ್ದ ಶ್ರೀಮಂತ ಇಲ್ಲವೇ ಜಮೀನುದಾರ ರೈತರ ಸಾಲಕ್ಕೆ ಕೊಕ್ಕೆ ಬೀಳಲಿದೆ. ಯಾರು ತಮ್ಮ ಖಾತೆಯಲ್ಲಿ ಎಷ್ಟು ಜಮೀನು ಹೊಂದಿದ್ದಾರೆ, ಇವರ ವಾರ್ಷಿಕ ವಹಿವಾಟು, ಎಲ್ಲೆಲ್ಲಿ ಸಾಲ ಪಡೆದಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕುವಂತೆ ಸರ್ಕಾರ ಬ್ಯಾಂಕ್ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದೆ.

No comments:

Post a Comment